ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ
ರಾಗ: ಮುಖಾರಿ        ತಾಳ: ಅಟ್ಟ
ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ 
ಕಾಕುಮಾಡದೆ ಕಾಯೊ ಭವದೊಳಗೆ ಬಳಲಿದೆನು ||ಪಲ್ಲವಿ||

ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ
ಮಂದಮತಿಯಿಂದ ಬಲು ಮರುಳಾದೆನೊ
ಸಂದಿತೈ ಯೌವನವು ಬುದ್ಧಿ ಬಂದಿತು ಈಗ
ಸಂದೇಹಪಡದೆ ನೀ ಕರುಣಿಸೈ ಎನ್ನ        || ೧ ||

ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ಕಾಡುತಿಹರು
ಮುಂಡಮೋಚಿದೆ ನಾನು ಇನ್ನಾರು ಗತಿ ಎನಗೆ
ಪುಂಡರೀಕಾಕ್ಷ ನೀ ಕರುಣಿಸೈ ಎನ್ನ            || ೨ || 

ಅಟ್ಟ ಮೇಲೆ ಒಲೆಯು ಉರಿವಂತೆ ಎನಗೀಗ
ಕೆಟ್ಟ ಮೇಲೆ ಅರಿವು ಬಂದಿತಯ್ಯ
ನೆಟ್ಟನೆ ಪುರಂದರವಿಠಲನೆ ಕೈ ಬಿಡದೆ
ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ           || ೩ || ದಾಸವಾಣಿ
ರಚನೆ : ಪುರಂದರದಾಸರು.
ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ